28 January 2012

ಒಂದು ಸ್ವಪ್ನ

ಓ ಮಂಕಾಳೀ 
ಅಳಿದುಳಿದ ಕೇರಿಯ ಗಟ್ಟಿಗಿತ್ತಿ


ಘಾಟಿ ಹೆಂಗಸೆಂದರಲ್ಲವೇ ಎಲ್ಲ 
ನಿನ್ನ ಬೆನ್ನ ಹಿಂದೆ 
ಹೂತು ಹೋದ ಹಿಡಿ 
ಮೀಸೆ ಹೊತ್ತು ತಿರುಗುವ 
ಕೇರಿಯ ಮಹಾ ಮಾನವಂತರು 

ಅವರೆಲ್ಲರಿಗಿಂತ 
ಬಹಳ ಕಿರಿಯ ನಾನು 
ದೂರ ನಿಂತು ನೋಡಿಕೊಂಡೆ ಎಲ್ಲ 
ಸುಮ್ಮನೆ 
ನಿನ್ನ ಮಡಿಲಲ್ಲಿ ಕೂತು 
ಸೆರಗಿಂದ ಒಂದೊಂದಾಗಿ ತೆಗೆದು 
ತಿಂದ ಹಸಿ 
ಗೇರು ಬೀಜದ ರುಚಿ 
ಮರೆಯಲಾಗದಂತೆ ಹತ್ತಿಸಿಕೊಂಡೆ    
ತಿನ್ನುತ್ತ ಕದ್ದ ಮಾಲನ್ನು 
ಜೀರ್ಣಿಸಿಕೊಂಡೆ ಅರೆ 
ಪಾವು ಪಾಪ ಪ್ರಜ್ನೆಯನ್ನೂ 

ನಿನ್ನ ತುಟಿಯಂಚಿನ 
ಅಂಬಾಡಿ ಕುಡಿ ಕರಗಿ  
ಕೆಂಪು-ಕೆಂಪಾಗಿ ಗಲ್ಲಕ್ಕೆಲ್ಲ ಹರಡಿ 
ರಂಗೇರುವಾಗ 
ಮೆಲುಕು ಹಾಕುತ್ತಿದ್ದೆಯಲ್ಲ ನೀ -


ಅವರಿವರ ಮನೆ 
ನಿನ್ನ ಮನೆಯೆನ್ನದೆ ಸಾರ್ವತ್ರಿಕವಾಗಿ 
ಮಂತ್ರಾಕ್ಷತೆ ಪಡೆದವರ ಪ್ರವರ 
ಒಂದೊಂದು ಮನೆಯೊಳಗೂ 
ನೀ ಎತ್ತಿದ ಹಾನದ ವಿವರ 

ಇಡೀ ಕೇರಿಯೇ 
ನಡು ಮುರಿದಂತೆ ಅಶ್ವತ್ಥ ಕಟ್ಟೆಯೆದುರು 
ಒಂದು ಪೊಕಳೆಯನ್ನೂ ಹೊಡೆಯದೆ 
ಕೈಕಟ್ಟಿ ಕುಳಿತಾಗ 
ಬಿರಬಿರನೆ ಕೈ ಬೀಸಿ ನೀ 
ನಡೆದು ಹೋದ ಆ ಥರ 

ಒಬ್ಬೊಬ್ಬರಾಗಿ 
ಕೇರಿ ಬಿಟ್ಟು ಹೊರಟರಲ್ಲ 
ಸಾಲು ಕೇರಿಯ ನಡು ಮಧ್ಯ 
ಬೀಗ ಜಡಿದು 
ಕೇರಿಯುದ್ದ ನೀ ಕುಣಿಯುತ್ತ ಹೋದಂತೆ 
ಬಿದ್ದ ಮುಗಿಯದ ಸ್ವಪ್ನ 


ಓ ಮಂಕಾಳೀ
ನೋಡಿಲ್ಲಿ ಉಳಿದವರೂ ಬಿಡುತ್ತಿದ್ದಾರೆ 
ಯಾರ ಕಣ್ಣಂಚೂ ಕಾಣಿಸದಂತೆ 
ಕಪ್ಪು ಕನ್ನಡಕ ತೊಡಿಸಿ 
ತಂತಮ್ಮ ತಾಯ್ತಂದೆಯರ ಹತ್ತಿಸಿಕೊಂಡು 
ದಾರಿಯುದ್ದಕ್ಕೂ ಪರ ಊರ 
ಪರಿಮಳ ಹರಡಿ ಹೊರಟಿದ್ದಾರೆ 


ಖಾಲಿ ಕೇರಿಯ ಹಿಂದಿನ  
ಜಿಗ್ಗು ಬಿದ್ದ ಗೇರುಮರದ ತುಂಬ 
ಅತಂತ್ರ ಪರಿಮಳ ಸುತ್ತುತ್ತಿದೆ 
ನೀ ಕೊಟ್ಟ ಹಸಿ ಗೇರು 
ರುಚಿ ಕಳೆದು ಬೀಳುತ್ತಿದೆ 

ಬಾ ಬೇಗ 
ತೊಟ್ಟು ಕಳಚಿ ಬೀಳುವ ಮುನ್ನ 
ಒಂದು ತಂಬಿಗೆ ನೀರಿತ್ತು 
ಎಲ್ಲ ರುಚಿಯನ್ನೂ 
ನಿನ್ನ ಮಡಿಲಲ್ಲಿ ತುಂಬಿಕೊ 

ಕೇರಿ ಬಿಟ್ಟು ಹೊರಟವರಿಗೆಲ್ಲ 
ಅವರವರ ಮನೆ ಕಾಣಿಸು 
ಹಸಿದ ಮರಿ-ಮಕ್ಕಳಿಗೆಲ್ಲ 
ಹಸಿ ಗೇರಿನ ರುಚಿ ತೋರಿಸು  

No comments:

Post a Comment