15 September 2011

ಅನಿಸಿದ್ದಿರಬಹುದು ..

ಈ ಲಜ್ಜೆಯ
ಮೂಗೊತಿಯ ಒಜ್ಜೆ
ತಡೆಯಲಾರೆ ನಾ
ಬಿಚ್ಚಿಡುವೆ
ಕಾರಿರುಳ ಕಾಡಿಗೆಯ
ಕತ್ತಲ ಕಳೆಯಲಾರೆ
ಅಳಿಸಿರುವೆ
ತುಟಿಯ ಶೃಂಗರಿಸಿದ
ಕೆಂಪಿಗಿಲ್ಲವೇ ಹೃದಯ?
ತೊಳೆದಿಡುವೆ
ಹಣೆಯ ಕುಂಕುಮ
ಬೀಗಿ ಬಿಂಕದಿಂದ 
ಒರೆಸಿಡುವೆ

ಬಿಚ್ಚಿ ಮಣಭಾರದ
ಈ ಜರತಾರಿ ಸೀರೆ
ಹೊರಡುವೆ


ಜನಪದವ ಬಿಟ್ಟು
ಜನರಿರದ ಊರಿಗೆ

14 September 2011

ತ್ರಿಶಂಕು ಸ್ವರ್ಗ

ಒಂದು ಸರಿ ಮನೆಯೇ ಇಲ್ಲ ಅನ್ನುತ್ತ
ಲೇ ಅಲ್ಲಿಂದ ಹೊರ ಹೊರಟರೂ 
ಇಲ್ಲಿನ್ನೂ ಸರಿಯಾಗಿ ಒಳಗೆ ಬಿಟ್ಟುಕೊಂಡಿಲ್ಲದ
ಅನುಮಾನದಲ್ಲೇ ಸಹನೆಯ ಕಟ್ಟೆ ಒಡೆದು ಹೊರಟಿದ್ದಾಳೆ

ಬಿರುಕು ಬಿಟ್ಟ ತಾರಸಿಯ ಮೈಮೇಲೆ
ಹೊರಡುವ ಮೊದಲೇ ಮಾಡಿಟ್ಟ ಚಿತ್ರಕಲೆ.
ಪಾಚಿ ಕಟ್ಟಿದ ಹಕ್ಕೆಯ ಊರೊಳಗೆ 
ಮಳೆ ಒಳಗೆ ಮನೆ ಹೊರಗೆ ಆದ ಸು
ಸಂದರ್ಭದಲ್ಲೇ ಆಚಿಂದ ಈಚೆ ಈಚಿಂದ ಆಚೆ
ಹೊರಳಿದವಳೇ ಹೊಸಾ ಸ್ಟೇಟ್ಮೆಂಟು ಹೊರಡಿಸಿದ್ದಾಳೆ

ನಾಳೆಯೇ ಟ್ರಿನಿಟಿ ವೃತ್ತದ ನಡುವೆ
ಅವಳದೇ ಒಂದು ತ್ರಿಶಂಕು ಸ್ವರ್ಗಕ್ಕೆ ಶಂಕು
ಸ್ಥಾಪನೆ ಆಗಲಿದೆ ಮಾನ್ಯ ಮೂರು ಶ್ರೀಗಳಿಂದ
ಒಬ್ಬ ಶಂಕು ಇನ್ನೊಬ್ಬ ತ್ರಿಶಂಕು ಬಿಟ್ಟರೆ
ವಾಸ್ತುನಿಷ್ಟರ ಜೊತೆಯಾಗಿ ಅವಳೊಬ್ಬಳೆ ವಸ್ತುನಿಷ್ಟಳು

ತಾಪಿಯ ತುದಿ ಹತ್ತಿದ ಹಸಿರ ಕೆರಸುತ್ತ
ಮುರುಕು ಸಂದಿಯಲ್ಲೆಲ್ಲ ಬಿಕ್ಕಿನ ಗಿಲಾಯಿ
ಬಡಿಯುತ್ತ  ವಟ್ಟೆ ಮುಚ್ಚಿದ್ದಾರೆ ಅಲ್ಲಿ
ತಪಕ್ಕನೆ ಆದ ಗಾಯಕ್ಕೆ ಮುಲಾಮು ಹಚ್ಚುತ್ತ
ಮನೆಯ ಮೈಯೆಲ್ಲ ಮಳ್ಳು ಕಳ್ಳಿಯ ಹೊಡೆದು
ದುರ್ಬೀನು ಹಿಡಿದು ನೋಡುತ್ತಿದ್ದಾರೆ

ಇಲ್ಲಿವಳು ಟ್ರಿನಿಟಿ ವೃತ್ತದ ತುದಿಯಲ್ಲಿ  ಕುಳಿತು
ಹಾಸಿಕೊಂಡಲ್ಲೇ ಲೆಕ್ಕ ಹಾಕಿದ್ದಾಳೆ
ಇನ್ನೆಷ್ಟು ಎತ್ತರಕ್ಕೆ ಕನಸ ಏರಿಸಿಕೊಂಡರೆ
ತ್ರಿಶಂಕು ಸ್ವರ್ಗಕ್ಕೆ ಸೀದಾ ಪ್ರವೇಶ ಪಡೆಯಬಹುದೆಂದು...

13 September 2011

ಹಾರಲಾರದ ಕನಸು

ಗೂಡಿನಲ್ಲಿ ಬಚ್ಚಿಟ್ಟ ಕನಸಿಗೆ ರೆಕ್ಕೆಗಳು ಬಂದರೆ
ಏನಾಗುತ್ತೆ ಮಹಾ ಹಾರುವುದನ್ನ ಕಲಿತಿಯಾವು
ಹಾರಿಯೂ ಹೋದಾವು.
ದೀಪ ಹಚ್ಚುವ ವೇಳೆಗೆ ಬಂದುಬಿಡಿ ಎಂದರೆ ಬಂದಾವೆ?
ಎದೆಯ ಗೂಡೊಳಗೆ ಬಚ್ಚಿಟ್ಟು ಬೆಚ್ಚಗಿಟ್ಟಷ್ಟು ಹೊತ್ತು ಅವು ನನ್ನವು
ಬಲಿತ ರೆಕ್ಕೆಯ ಜೊತೆಗೆ ನಂಟಿನ ಅಂಟೂ ಕಳಚಿ
ಹಂಗು ಹರಿದು ಹಗುರಾಗಿ
ಒಂದಿದ್ದದ್ದು ಎರಡಾಗಿ ಮೂರಾಗಿ ಆರಾಗಿ ಮೂಲ ಮರೆಯಾಗಿ, ಮಾಯೆಯಾಗಿ
ಛೇ ಬಿಡಿ, ಅವು ಹಾರುವುದಕ್ಕೆಂದೇ ಕಂಡ ಕನಸುಗಳು
ಗೂಡೊಳಗೆ ಇದ್ದಿದ್ದರೆ ಅನರ್ಥವಾಗುತ್ತಿತ್ತು
ಇರಬೇಕಪ್ಪ ಇನ್ನೊಂದಿಷ್ಟು ಕನಸುಗಳು
ಅವಿತಿಟ್ಟು ಮೌನಕ್ಕೆ ಕಾವಾಗಿ ಎದೆಯ ಗೂಡೊಳಗೇ ಬಿರಿದು
ಅರಳಿ, ಕಣ್ಣೊಳಗೆ ಕಂಪ ಸೂಸಿ ನನ್ನೊಂದಿಗೇ ಇರುವ ಹಾರಲಾರದ ಕನಸುಗಳು!

--- ಪ್ರಜ್ಞಾ ಶಾಸ್ತ್ರಿ

9 September 2011

ತೀರದ ಮೋಹ

ನಿನ್ನದೇ ಬಿಂಬ ನೋಡು
ನಾಚಿ ಜಾರುವ ಹನಿಯೊಳಗೆ
ತಿಳಿ ಬಾಳೆಯ ಕೊಳದೊಳಗೆ
ಬೆಳಕಿನೆಳೆ
ಹರಿವಾಗ
ಮೈಚಾಚಿ ಕುಳಿತು ಗೋಡೆಗೆ
ಬಿಂಬ ಹಚ್ಚಿಟ್ಟು
ಮುನ್ನುಡಿಯಿರದ ಪುಸ್ತಕ ಓದುತ್ತ
ನೀ ಉಳಿದ
ಕನ್ನಡಿಯೂ ಇರದ ಮನೆಯೊಳಗೆ

ಮುಗಿಸಿದ್ದೇ
ಪುಟದಿಂದ ಪುಟಕ್ಕೆ
ಕೊನೆಯ ಮಡತೆ ಕಿವಿ ಬಿಚ್ಚಿ
ಹಾರಿದ್ದೆ ತಡ 
ನೀಲಿಯಾದೆ ನೀನು

ನೋಡುತ್ತ 
ಹಸಿ ನೆಲದೊಳಗಿಂದ ಎದ್ದು
ನೀರ ಸೆಲೆ
ಹಾವಸೆಯ ಹಸಿರೊಳಗೆ ಹರಿದು
ತನಗೇ ತಿಳಿಯದಂತೆ
ಕೆಂಪು ಹರಿವಲ್ಲಿ ಸೇರಿಹೋಗುತ್ತದೆ 
ಬೊಗಸೆ ಹಿಡಿದರೆ 
ಸ್ವಚ್ಚ ಸೇರು ನೀರು
ಗಟಗಟನೆ ಕುಡಿದು ಬೀಳ್ಕೊಂಡರೆ
ಮಣ್ಣ ವಾಸನೆಯೂ
ತಪ್ಪಿಸದೇ ಬೆನ್ನು ಹಿಡಿಯುತ್ತದೆ

ಹಿಡಿದಷ್ಟು ಬೊಗಸೆ
ಕುಡಿವಷ್ಟು ನೀರು
ಇದೆಂಥ ಮುಗಿಯದ ದಾಹ?

ತಿರುಗಿ ಗಾಜಿನೊಳಗೆ
ಒಂದು ಮೀನು
ಒಂದೇ ಉಸಿರಿಗೆ ಹುಡುಕುತ್ತಿರುವಾಗ
ನಿನ್ನೆ ಹುಟ್ಟಿದ
ಕರುವಿನ ಕತ್ತಿಗೆ ಕಣ್ಣಿ
ಬಿಗಿದುಕೊಂಡು
ಕಣ್ಣ ತುಂಬಾ ನೋವು ಹೊರಡುವಾಗ
ಹಾಯ್...
ಮೂರು ಸಲ ಕೂಗಿದರೂ
ಕಾಣಿಸದ ಕಾಗೆಗೆ ಹುಡುಕಿ ಉಣ್ಣುವಾಗ..

ಮತ್ತೀಗ
ಕಣ್ಣೊಳಗೆ ಹಸಿರು ತುಂಬಿಸಿ
ಬಿಂದಿಗೆ ತುಂಬ ಬಿಂಬ
ಹಿಡಿದು ದಾಹ ತೀರಿಸಿಕೊಳ್ಳಬೇಕು
ತೀರದ ಮೋಹ ಅರಸಬೇಕು