13 September 2011

ಹಾರಲಾರದ ಕನಸು

ಗೂಡಿನಲ್ಲಿ ಬಚ್ಚಿಟ್ಟ ಕನಸಿಗೆ ರೆಕ್ಕೆಗಳು ಬಂದರೆ
ಏನಾಗುತ್ತೆ ಮಹಾ ಹಾರುವುದನ್ನ ಕಲಿತಿಯಾವು
ಹಾರಿಯೂ ಹೋದಾವು.
ದೀಪ ಹಚ್ಚುವ ವೇಳೆಗೆ ಬಂದುಬಿಡಿ ಎಂದರೆ ಬಂದಾವೆ?
ಎದೆಯ ಗೂಡೊಳಗೆ ಬಚ್ಚಿಟ್ಟು ಬೆಚ್ಚಗಿಟ್ಟಷ್ಟು ಹೊತ್ತು ಅವು ನನ್ನವು
ಬಲಿತ ರೆಕ್ಕೆಯ ಜೊತೆಗೆ ನಂಟಿನ ಅಂಟೂ ಕಳಚಿ
ಹಂಗು ಹರಿದು ಹಗುರಾಗಿ
ಒಂದಿದ್ದದ್ದು ಎರಡಾಗಿ ಮೂರಾಗಿ ಆರಾಗಿ ಮೂಲ ಮರೆಯಾಗಿ, ಮಾಯೆಯಾಗಿ
ಛೇ ಬಿಡಿ, ಅವು ಹಾರುವುದಕ್ಕೆಂದೇ ಕಂಡ ಕನಸುಗಳು
ಗೂಡೊಳಗೆ ಇದ್ದಿದ್ದರೆ ಅನರ್ಥವಾಗುತ್ತಿತ್ತು
ಇರಬೇಕಪ್ಪ ಇನ್ನೊಂದಿಷ್ಟು ಕನಸುಗಳು
ಅವಿತಿಟ್ಟು ಮೌನಕ್ಕೆ ಕಾವಾಗಿ ಎದೆಯ ಗೂಡೊಳಗೇ ಬಿರಿದು
ಅರಳಿ, ಕಣ್ಣೊಳಗೆ ಕಂಪ ಸೂಸಿ ನನ್ನೊಂದಿಗೇ ಇರುವ ಹಾರಲಾರದ ಕನಸುಗಳು!

--- ಪ್ರಜ್ಞಾ ಶಾಸ್ತ್ರಿ

2 comments:

  1. ಪ್ರಜ್ಞಾ,
    ನಿಮ್ಮ ಮನೆಗೆ ಭೇಟಿ ನೀಡಿದ್ದು ಸಂತಸ ಕೊಟ್ಟಿತು. ನಾನು ಬಹಳವಾಗಿ ಮೆಚ್ಚುವ ಶೈಲಿಯ ಕವಿತೆಗಳು ನಿಮ್ಮವು. ’ತೀರದ ಮೋಹ’ ಇದಕಿಂತ ಚೆನ್ನಾಗಿದೆ. ದಯವಿಟ್ಟು ಹೆಚ್ಚು ಬರೆಯಿರಿ. - ಟೀನಾ.

    ReplyDelete
  2. ಟೀನಾ,
    'ಶಬ್ಧತೀರ'ದ ಮೊದಲ ಪ್ರತಿಕ್ರಿಯೆ ನಿಮ್ಮದು. ಧನ್ಯವಾದಗಳು...

    ReplyDelete